ಕ್ರಮಕಾರಗಳು ಮತ್ತು ನಿಯಾಮಕಗಳು

ಜವ (ಸ್ವೀಡ್) ಉಷ್ಣತೆ, ಒತ್ತಡ ಇತ್ಯಾದಿಗಳನ್ನು ಸ್ಥಿರವಾಗಿಡುವುದರ ಮೂಲಕ ಬೇಡಿಕೆಗೆ ಅನುಗುಣವಾಗಿ ಸಾವಥ್ರ್ಯ (ಪವರ್), ಉಷ್ಣ, ತರಲ (ಫ್ಲೂಯಿಡ್) ಮುಂತಾದವನ್ನು ನಿಯಂತ್ರಿಸುವ ಸಾಧನಗಳು (ರೆಗ್ಯುಲೇಟರ್ಸ್ ಅಂಡ್ ಗವರ್ನರ್ಸ್).  ಸಾಮಾನ್ಯವಾಗಿ ಉಷ್ಣತೆ ಒತ್ತಡ ಮುಂತಾದವುಗಳ ನಿಯಂತ್ರಣ ಮಾಡುವ ಸಾಧನಗಳನ್ನು ಕ್ರಮಕಾರಕಗಳೆಂದೂ ಅಂತರ್ದಹನ ಎಂಜಿನ್, ತಿರುಬಾನಿ, ಆವಿ ಎಂಜಿನ್ ಮುಂತಾದ ಉತ್ಪಾದಕಗಳ ಜವಗಳನ್ನು ನಿಯಂತ್ರಿಸುವ ಸಾಧನಗಳನ್ನು ನಿಯಾಮಕಗಳೆಂದೂ ಕರೆಯುವುದು ವಾಡಿಕೆ.  ಯಾವ ಕೆಲಸದಲ್ಲೂ ಒಂದು ಮಿತಿಯನ್ನು ದಾಟಿದರೆ ಅಪಾಯವಿರುತ್ತದೆ.  ಉದಾಹರಣೆಗೆ ಎಂಜಿನ್ನುಗಳ ಹೊರೆ (ಲೋಡ್) ಹಠಾತ್ತನೆ ತಗ್ಗಿದರೆ ಜನ ಅತಿಯಾಗಿ ಹೆಚ್ಚಿ ಅಪಾಯದ ಅಂಚನ್ನು ತಲಪಬಹುದು. ಇದೇ ರೀತಿ ಹೊರೆ ಹೆಚ್ಚಿದರೆ ಜವ ತೀವ್ರವಾಗಿ ತಗ್ಗಿ ಕೈಮುಂದಿರುವ ಕಾರ್ಯಗಳಿಗೆ ಅಡ್ಡಿಯಾಗಬಹುದು.  ಆವಿಗೆಗಳಲ್ಲಿ ನೀರಿನ ಮಟ್ಟ ತಗ್ಗಿದರೆ ಭಾಗಗಳು ಅತಿಯಾಗಿ ಕಾದು ಅನಾಹುತ ಸಂಭವಿಸಬಹುದು.  ಆವಿಗೆಗಳಲ್ಲಿ ನೀರಿನ ಮಟ್ಟ ತಗ್ಗಿದರೆ ಭಾಗಗಳು ಅತಿಯಾಗಿ ಕಾದು ಅನಾಹುತ ಸಂಭವಿಸಬಹುದು.  ಆದ್ದರಿಂದ ಇತರ ಪರಿಸ್ಥಿತಿಗಳು ಬದಲಾದರೂ ಜವ, ನೀರಿನ ಮಟ್ಟ ಇತ್ಯಾದಿ ನಿರ್ಧರಿತ ಪರಿಮಾಣಗಳು ತಮ್ಮ ಸಾಮಾನ್ಯ ಬೆಲೆಗಳನ್ನು ಕಾಪಾಡಿಕೊಳ್ಳುವಂತೆ ಮಾಡಲು ಕ್ರಮಕಾರಕಗಳು ಮತ್ತು ನಿಯಾಮಕಗಳು ಅವಶ್ಯಕ.

ಕಾರ್ಯತತ್ತ್ವ:  ಂ  ಎಂಬುದು ಚರಪರಿಮಾಣವೆಂದೂ (ವೇರಿಯಬಲ್ ಕ್ವಾಂಟಿಟಿ) ಇದನ್ನು ನಿಯಂತ್ರಿಸುವುದು ನಮ್ಮ ಧ್ಯೇಯವೆಂದೂ ಭಾವಿಸೋಣ.  ಈ ಪರಿಮಾಣ ಜವ, ಉಷ್ಣತೆ, ಒತ್ತಡ, ಪ್ರವಾಹದರ, ವಿದ್ಯುತ್ ಒತ್ತಡ ಮುಂತಾದವುಗಳಲ್ಲಿ ಯಾವುದು ಬೇಕಾದರೂ ಆಗಿರಬಹುದು.  ಇದು ಬೀರುವ ಬಲವನ್ನು ಹೊರೆ, ಸ್ಪ್ರಿಂಗ್, ತರಲದ ಒತ್ತಡ ಮುಂತಾದ ಬಾಹ್ಯಬಲಗಳು ಸರಿದೂಗಿಸುತ್ತವೆ (ಬ್ಯಾಲೆನ್ಸ್).  ಂ ಎಂಬ ನಿಯಂತ್ರಿತ ಪರಿಮಾಣ ಬದಲಾದರೆ ಈ ಸರಿದೂಗಿಕೆ ಅಂದರೆ ಸಮತೋಲ ಕೆಡುತ್ತದೆ.  ಈ ಅಸಮತೋಲಿತ ಬಲ (ಅನ್‍ಬ್ಯಾಲೆನ್ಸ್ಡ್ ಫೋರ್ಸ್) ಸರಬರಾಜು ಮತ್ತು ಬೇಡಿಕೆಗಳನ್ನು ನಿಯಂತ್ರಿಸಿ ಂ ಯನ್ನು ಮತ್ತೆ ಅದರ ಸಾಮಾನ್ಯ ಬೆಲೆಗೆ ತರುತ್ತದೆ.

ಕ್ರಮಕಾರಕಗಳು :  ಒತ್ತಡ ನಿಯಂತ್ರಣಕ್ಕೆ ಒಳಗಾದ ಮಾಧ್ಯಮದ ಮೇಲೆ ಕೊಂತ ಅಥವಾ ಮಧ್ಯಪಟವಿದ್ದು (ಡಯಾಫ್ರಂ) ಅದು ಮಾಧ್ಯಮ ಹೇರುವ ಬಲವನ್ನು ಎದುರಿಸುತ್ತದೆ.  ಈ ಬಲ ಒತ್ತಡ ನಿಯಂತ್ರಣವನ್ನು ಮಾಡುತ್ತದೆ.  ಉದಾಹರಣೆಗೆ ಸಿಲಿಂಡರಿನಲ್ಲಿರುವ ಅನಿಲ ಅಥವಾ ಆವಿಯ ಒತ್ತಡವನ್ನು ನಿಯಂತ್ರಿಸಬೇಕೆಂದು ಭಾವಿಸೋಣ.  ಈಗ ಅನಿಲ ಅಥವಾ ಆವಿಯ ಮೇಲೆ ನಿರ್ದಿಷ್ಟ ತೂಕದ ಕೊಂತವಿಟ್ಟಾಗ ಅನಿಲದಲ್ಲಿ ನಿರ್ದಿಷ್ಟ ಒತ್ತಡವುಂಟಾಗುತ್ತದೆ.  ಒತ್ತಡ ಹೆಚ್ಚಿದಾಗ ಕೊಂತ ಎತ್ತಲ್ಪಟ್ಟು ಗಾತ್ರ ಹೆಚ್ಚುತ್ತದೆ.  ಇದರಿಂದ ಒತ್ತಡ ತಗ್ಗಿ ಮುಂಚಿನ ಬೆಲೆಯಲ್ಲಿ ನಿಲ್ಲುತ್ತದೆ.  ಅಕಸ್ಮಾತ್ ಒತ್ತಡ ತಗ್ಗಿದರೆ ಕೊಂತ ಕೆಳಗಿಳಿದು ಗಾತ್ರ ತಗ್ಗುತ್ತದೆ.  ಗಾತ್ರ ಸಂಕೋಚನದಿಂದ ಒತ್ತಡ ಹೆಚ್ಚಿ ಮುಂಚಿನ ಬೆಲೆಯನ್ನು ಮುಟ್ಟುತ್ತದೆ.

ಉಷ್ಣತೆಯ ನಿಯಂತ್ರಣ : ಚಿತ್ರ 1ರಲ್ಲಿ ತೋರಿಸಿರುವ ಉಷ್ಣತಾ ಕ್ರಮಕಾರಕ x ಎಂದು ಗÀುರುತು ಮಾಡಿರುವ ಆವರಣದ ಉಷ್ಣತೆಯನ್ನು ನಿಯಂತ್ರಿಸಬೇಕು.  ಚಿತ್ರದಲ್ಲಿ ತೋರಿಸಿರುವ ಕ್ರಮಕಾರಕವನ್ನು ಕಡಿಮೆ ಉಷ್ಣತೆಗಳನ್ನು ನಿಯಂತ್ರಿಸಲು ಉಪಯೋಗಿಸಿಸುತ್ತಾರೆ.  ಈಗ x ಆವರಣದ ಉಷ್ಣತೆ ಹೆಚ್ಚಾಯಿತೆಂದು ಭಾವಿಸೋಣ.  ಆಗ ಉಷ್ಣತಾಮಾಪಿಯ ಬುರುಡೆಯಲ್ಲಿರುವ ಅನಿಲ ವಿಸ್ತರಿಸುತ್ತದೆ.  ಇದು ಪುಟಿತತೆ ಇರುವ (ಇಲಾಸ್ಟಿಸಿಟಿ) ತಿದಿಯನ್ನು ಉಬ್ಬಿಸುತ್ತದೆ.  ಹೀಗಾಗಿ ಅಡ್ಡದಂಡದ ಚಿ ತುದಿ ಮೇಲೇಳುತ್ತದೆ b ತುದಿ ಕೆಳಗೆ ತಳ್ಳಲ್ಪಡುತ್ತದೆ.  ಇದರಿಂದ ಇದಕ್ಕೆ ಜೋಡಿಸಿರುವ ಕವಾಟದಂಡ ಕೆಳಗೆ ಸರಿದು ಕವಾಟ ಮುಚ್ಚಲ್ಪಡುತ್ತದೆ.  ಆಗ ಉಷ್ಣಕಮಾಧ್ಯಮ (ಹೀಟಿಂಗ್ ಮೀಡಿಯಂ) ಒಳಗೆ ಬರಲು ದಾರಿಯಿಲ್ಲದೆ ಆವರಣದ ಉಷ್ಣತೆ ತಗ್ಗುತ್ತದೆ.  ಉಷ್ಣತೆ ಅಗತ್ಯದ ಬೆಲೆಗಿಂತ ತಗ್ಗಿದರೆ ತಿದಿ ಕುಗ್ಗಿ ದಂಡವನ್ನು ಜಗ್ಗುತ್ತದೆ.  ಆಗ ಕವಾಟ ತೆರೆದು, ಹೆಚ್ಚು ಉಷ್ಣಕಮಾಧ್ಯಮ ಒಳಬರಲು ಅವಕಾಶ ಮಾಡಿಕೊಡುತ್ತದೆ.  ಇದರಿಂದ  ಉಷ್ಣತೆ ಮುಂಚಿನ ಬೆಲೆಯನ್ನು ಮುಟ್ಟುತ್ತದೆ.

ಕಾರ್ಯಕ್ರಮ ಕ್ರಮಕಾರಗಳು (ಪ್ರೋಗ್ರಾಂ ರೆಗ್ಯುಲೇಟರ್ಸ್):  ಕೆಲವು ಕಾರ್ಯಗಳಿಗೆ ನಿಯಂತ್ರಿತ ಪರಿಮಾಣ ಸ್ಥಿರವಾಗಿರಬೇಕಾದ್ದಿಲ್ಲ.  ಆದರೆ ಪೂರ್ವನಿರ್ಧಾರದಂತೆ ನಿಧಾನವಾಗಿ ಏರಿ ಮತ್ತೆ ಇಳಿಯಬೇಕು.  ಉದಾಹರಣೆಗೆ ಅನ್ನೀಲನ (ಅನ್ನೀಲಿಂಗ್) ಕುಲುಮೆಯ ಉಷ್ಣತೆ ನಿಧಾನವಾಗಿ ಪೂರ್ವನಿರ್ಧರಿತ ದರದಲ್ಲಿ ಹೆಚ್ಚಿ ಬಳಿಕ ಅದೇ ದರದಲ್ಲಿ ಇಳಿಯುವುದು ಸಾಧ್ಯವಾದರೆ ಉಷ್ಣಸಂಸ್ಕರಣಕ್ಕೆ ಬೇಕಾದ ರೀತಿಯಲ್ಲಿ ಲೋಹದ ಶೀತಲಿಕೆ ಮಾಡಬಹುದು.  ಇದನ್ನು ಕಾರ್ಯಕ್ರಮ ಕ್ರಮಕಾರಕಗಳು ಮಾಡಬಲ್ಲುವು.  ಗಡಿಯಾರದ ಹತೋಟಿಯಲ್ಲಿರುವ ವಕ್ರ ತಟ್ಟೆ (ಕ್ಯಾಂ) ನಿಯಂತ್ರಣಬಿಂದುವನ್ನು ನಿರ್ದಿಷ್ಟವಾಗಿ ಪಲ್ಲಟಗೊಳಿಸಿ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.  ಕೇವಲ ಒಂದು ಪರಿಮಾಣವನ್ನು ಮಾತ್ರವಲ್ಲ ಕ್ರಿಯೆಯ ಎಲ್ಲ ಮುಖ್ಯ ಪರಿಮಾಣಗಳನ್ನೂ ಪೂರ್ವ ನಿಯೋಜಿತ ಕಾರ್ಯಕ್ರಮದಂತೆ ಸ್ವಯಂ ಬದಲಾವಣೆಗೊಳ್ಳುವಂತೆ ಮಾಡಬಹುದು.  ಗಡಿಯಾರದ ಹತೋಟಿಯಲ್ಲಿರುವ ಹಾಗೂ ಸ್ಥಿರ ಜವದಲ್ಲಿ ತಿರುಗುತ್ತಿರುವ ದಂಡಕ್ಕೆ ಜೋಡಿಸಿರುವ ಅನೇಕ ವಕ್ರ ತಟ್ಟೆಗಳು ಒತ್ತಡ, ಉಷ್ಣತೆ, ಪ್ರವಾಹದರ ಮುಂತಾದ ಅನೇಕ ಪರಿಮಾಣಗಳನ್ನು ನಿಯಂತ್ರಿಸುತ್ತವೆ.  ದಂಡದ ಜವ ಮತ್ತು ವಕ್ರ ತಟ್ಟೆಗಳ ಬದಲಾವಣೆಯಿಂದ ಕಾರ್ಯಕ್ರಮವನ್ನೇ ಬದಲಾಯಿಸಬಹುದು.
ಪ್ರಭರಣ ಜಲ ನಿಯಂತ್ರಣ (ಫೀಡ್ ವಾಟರ್ ರೆಗ್ಯುಲೇಷನ್):  ಆವಿಗೆಯಲ್ಲಿ ನೀರಿನಮಟ್ಟ ಕಾಪಾಡುವುದು ಅವಶ್ಯಕ.  ವಾಟವಾಗಿರುವ ಲೋಹಕೊಳವೆಯ ವಿಸ್ತರಣ ಅಥವಾ ಕುಗ್ಗುವಿಕೆಯಿಂದ ಪ್ರಭರಣ ಕವಾಟ ಮುಚ್ಚುತ್ತದೆ ಅಥವಾ ತೆರೆಯುತ್ತದೆ.  ಇದರಿಂದ ಪ್ರಭರಣ ಜಲನಿಯಂತ್ರಣ ಮಾಡಬಹುದು.
ಪ್ರವಾಹದರ ನಿಯಂತ್ರಣ:  ಒಂದು ವೆಜ್ಜ (ಆರಿಫಿಸ್), ನಾಸಾಗ್ರ ಮುಂತಾದವುಗಳ ಮೂಲಕ ಆಗುವ ಒತ್ತಡಪಾತದಿಂದ ಇದನ್ನು ಸಾಧಿಸಬಹುದು.

ನಿಯಾಮಕಗಳು (ಗವರ್ನರ್ಸ್):  ಇವು ಉತ್ಪಾದಕಗಳ ಜವವನ್ನು ನಿಯಂತ್ರಿಸುವ ಸಾಧನಗಳು.  ಸಾಮಥ್ರ್ಯ ಉತ್ಪಾದನೆಯಲ್ಲಿ ಉತ್ಪಾದಕಗಳ ಮೇಲಿನ ಹೊರೆ ಮುಂತಾದ ಅನೇಕ ಪರಿಮಾಣಗಳು ಬದಲಾಗುವ ಸಾಧ್ಯತೆಯಿದ್ದು ಎಲ್ಲ ಪರಿಸ್ಥಿತಿಗಳಲ್ಲೂ ಜವ ನಿಯಂತ್ರಿಸುವ ಕರ್ತವ್ಯವನ್ನು ನಿಯಾಮಕಗಳು ನಿರ್ವಹಿಸಬೇಕು.  ಅನಿಲ, ಆವಿಯ ತಿರುಬಾನಿ ಅಥವಾ ಅಂತರ್ದಹನ ಎಂಜಿನ್ನುಗಳಲ್ಲಿ ಇಂಧನ ಅಥವಾ ಆವಿ ಶಕ್ತಿಯನ್ನು ಒದಗಿಸುತ್ತದೆ.  ಇಂಧನ ಒದಗಿಸುವ ದರವನ್ನು ನಿಯಾಮಕ ನಿಯಂತ್ರಿಸುವುದರ ಮೂಲಕ ಜವವನ್ನು ನಿಯಂತ್ರಿಸುತ್ತದೆ.  ನಿಯಾಮಕಗಳ ಆಯ್ಕೆಯಲ್ಲಿ ಕೆಳಗಿನ ವಿಷಯಗಳನ್ನು ಗಮನಿಸಬೇಕು: 1 ಉಪರೋಧಕ ಅಥವಾ ಇಂಧನ ನಿಯಂತ್ರಣ ಕವಾಟವನ್ನು ಚಲಿಸಬೇಕಾದ ಬಲ.  2 ಜವದ ವ್ಯಾಪ್ತಿ.  3 ಸಮಶ್ವರ ಆಚರಣೆಯ (ಐಸೊಕ್ರೊನಸ್ ಆಪರೇಷನ್) ಅಗತ್ಯ.  4 ಎಂಜಿನ್ನಿನ ಲಕ್ಷಣಗಳು ಇತ್ಯಾದಿ.
ಸೇವೆಯ ಭಿನ್ನಭಿನ್ನ ಪರಿಸ್ಥಿತಿಗಳನ್ನು ಅನುಸರಿಸಿ ತತ್ತ್ವ ಹಾಗೂ ರಚನೆಯಲ್ಲಿ ವಿಭಿನ್ನವಾದ ಅಸಂಖ್ಯಾತ ರೀತಿಯ ನಿಯಾಮಕಗಳಿವೆ.
1 ಆಚರಣೆಯ ತತ್ತ್ವವನ್ನಾದರಿಸಿರುವುದು: (i) ಅಪಕೇಂದ್ರಕ ಮತ್ತು (ii) ಜಡತ್ವ ನಿಯಾಮಕಗಳು.
2 ಆಚರಣೆಯ ಪ್ರಕಾರ ವಿಭಾಗಿಸಿರುವುದು: (i) ಸಂವೇದಿ (ಸೆನ್ಸಿಟಿವ್) ಮತ್ತು (ii) ಸಮಕಾಲಿಕ ಜವ ಮತ್ತು ಚರ ಜವ ನಿಯಾಮಕಗಳು.
3  ಆವಿಯ ನಿಯಂತ್ರಣದ ಪ್ರಕಾರ ಮಾಡಿರುವ ವಿಭಾಗ: (i) ಥ್ರಾಟಲ್: ಮತ್ತು (ii) ಚರ ಛೇದನ (ಮೇರಿಯೆಬಲ್ ಕಟ್ ಆಫ್) ನಿಯಾಮಕಗಳು.

4 ರಚನೆಗೆ ಸಂಬಂಧಿಸಿದ ವಿಭಾಗ: (i) ಲೋಲಕ ಮತ್ತು (ii) ದಂಡ ನಿಯಾಮಕಗಳು ಮೇಲಿನವುಗಳ ಪೈಕಿ ಕೆಲವನ್ನು ಇಲ್ಲಿ ವಿವರಿಸಿದೆ.

ಪರಿಭ್ರಮಕವನ್ನು (ರನ್ನರ್) ಮುಟ್ಟುವ ನೀರಿನ ಗಾತ್ರವನ್ನು ನಿಯಂತ್ರಿಸುವ ಮೂಲಕ ನಿಯಾಮಕ ತಿರುಬಾನಿಯ ಜವವನ್ನು ನಿಯಂತ್ರಿಸುತ್ತದೆ.  ಈ ಪ್ರವಾಹ ಬದಲಾವಣೆಗೆ ಅಗತ್ಯವಾದ ಶಕ್ತಿಯನ್ನು ತೈಲ ಒತ್ತಡ ಸರ್ವೋಮೋಟಾರ್ ಒದಗಿಸುತ್ತದೆ. ಚಿತ್ರ 2ರಲ್ಲಿ ತೋರಿಸಿರುವ ನಿಯಾಮಕವನ್ನು ಅಲವಡಿಸಿರುವ ತಿರುಬಾನಿಯ ಜವ ಹೆಚ್ಚಿದಂತೆ ಭಾವಿಸೋಣ.  ಆಗ ತಿರುಬಾನಿಯ ಮುಖ್ಯದಂಡದಿಂದ ಜವ ನಿಯಾಮಕವನ್ನು ತಲುಪುತ್ತದೆ.  ಇದರಿಂದ ನಿಯಾಮಕದ ಲೋಲಕದ ಗುಂಡುಗಳು ಜೋರಾಗಿ ತಿರುಗುತ್ತವೆ.  ಅಪಕೇಂದ್ರಕ ಬಲ ವೃದ್ಧಿಸಿ ನಿಯಾಮಕ ದಂಡ ಮೇಲಕ್ಕೆತ್ತಲ್ಪಡುತ್ತವೆ.  ಇದರ ಸಂಪರ್ಕದಲ್ಲಿರುವ ಸನ್ನೆಕೋಲಿನ (ಲಿವರ್) ಠಿ ತುದಿಯೂ ಏಳುತ್ತದೆ.  ಆಗ ಇದೇ ಸನ್ನೆಕೋಲಿನ ಕಿ ತುದಿ ಕೆಳಗೆ ನೂಕಲ್ಪಡುತ್ತದೆ.  ಹೀಗಾಗಿ ಇದಕ್ಕೆ ಲಗತ್ತಾಗಿರುವ ಕೊಂತದಂಡವೂ ಕೆಳಗೆ ಸರಿದು 2ನೆಯ ದ್ವಾರದ ಮೂಲಕ ಸರ್ವೋಮೋಟಾರಿನ ಎಡಭಾಗವನ್ನು ಪ್ರವೇಶಿಸುತ್ತದೆ.  ಆಗ ಕೊಂತ ಬಲಗಡೆಗೆ ಚಲಿಸಿ ಈಟಿಯನ್ನು ನಾಸಾಗ್ರದ ಬಾಯಿಗೆ ನೂಕುತ್ತದೆ.  ನಾಸಾಗ್ರದ ದ್ವಾರ ಕಿರಿದಾಗಿ ಹರಿವ ನೀರಿನ ಮೊತ್ತ ಕಡಿಮೆಯಾಗಿ ತಿರುಬಾನಿಯ ಜವ ತಗ್ಗುತ್ತದೆ.
ಆವಿ ಎಂಜಿನ್ನುಗಳಲ್ಲಿ ಉಪರೋಧಕ ಹಾಗೂ ಛೇದನ ನಿಯಾಮಕಗಳೆರಡೂ ಬಳಕೆಯಲ್ಲುಂಟು.  ಎಂಜಿನ್ನಿನ ದಂಡದಿಂದ ಚಲನೆ ನಿಯಾಮಕದ ರಾಟೆಗೆ ವರ್ಗವಾಗುತ್ತದೆ.  ಜವ ಹೆಚ್ಚಿದಾಗ ಲೋಲಕದ ಗುಂಡುಗಳು ಅಪಕೇಂದ್ರಕ ಬಲದಿಂದ ದೂರ ಸರಿಯುತ್ತವೆ.  ಆಗ ದಂಡ ಕೆಳಕ್ಕೆ ದೂಡಲ್ಪಟ್ಟು ಆವಿಯ ಪ್ರವೇಶದ್ವಾರ ಮುಚ್ಚಲ್ಪಡುತ್ತದೆ.  ಇದರಿಂದ ಒಳಗೆ ಪ್ರವೇಶಿಸುವ ಆವಿಯ ಉಪರೋಧಕ ಕ್ರಿಯೆಯಿಂದ ಪ್ರವೇಶಿಕ ಒತ್ತಡ ತಗ್ಗುತ್ತದೆ.  ಹೀಗಾಗಿ ಆವಿಯಿಂದಾಗುವ ಕಾರ್ಯ ತಗ್ಗಿ ಜವವೂ ತಗ್ಗುತ್ತದೆ.  ಈ ವಿಧಾನದಲ್ಲಿ ಆವಿಯ ಶಕ್ತಿ ವ್ಯರ್ಥವಾಗುತ್ತದೆ.  ಛೇದನ ವಿಧಾನದಲ್ಲಿ ಮೇಯರ್ ವಿಸ್ತರಣ ಕವಾಟ ಮುಂತಾದ ಉಪಕರಣಗಳ ಸಹಾಯದಿಂದ ಛೇದನ ಬಿಂದುವನ್ನು ಬದಲಾಯಿಸುವುದರಿಂದ ಒದಗಿಸುವ ಆವಿಯ ಮೊತ್ತವನ್ನು ಬದಲಾಯಿಸಿ ಜವವನ್ನು ನಿಯಂತ್ರಿಸಬಹುದು.  ಅಂತರ್ದಹನ ಎಂಜಿನ್ನುಗಳಲ್ಲಿ ಎಂಧನಗಾತ್ರದ ನಿಯಂತ್ರಣದಿಂದ ಜವ ನಿಯಂತ್ರಣ ಮಾಡಬಹುದು.

ಜಡತ್ವ ಬಲದ ನಿಯಾಮಕಗಳು:  ನಿಯಾಮಕ ದಂಡದ ಕೋನ ವೇಗೋತ್ಕರ್ಷ ಇಲ್ಲವೆ ವೇಗಾಪಕರ್ಷದಿಂದಾದ ಜಡತ್ವಬಲಗಳು ನಿಯಾಮಕ ಗುಂಡುಗಳ ಸ್ಥಾನಗಳನ್ನು ಬದಲಾಯಿಸತೊಡಗುವಂತೆ ಅವುಗಳ ಜೋಡಣೆಯಿರುತ್ತದೆ.  ನಿಯಾಮಕ ಗುಂಡುಗಳ ಸ್ಥಾನಪಲ್ಲಟವನ್ನು ಸೂಕ್ತ ಸ್ಪ್ರಿಂಗುಗಳು ನಿಯಂತ್ರಿಸುತ್ತವೆ.  ಈ ಪಲ್ಲವಿ ಸೂಕ್ತ ಯಂತ್ರಾವಳಿಯಿಂದ ಎಂಜಿನ್ನಿಗೆ ಒದಗಿಸುವ ಶಕ್ತಿಯನ್ನು ಹತೋಟಿಗೊಳಿಸಿ ಜವವನ್ನು ನಿಯಂತ್ರಿಸುತ್ತದೆ.             								(ಕೆ.ಆರ್.ಎಂ.ಒ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ